ಕಾಕ್ಸಿನೆಲ್ಲಿಡೀ 

  ಕೀಟವರ್ಗದ ಕೋಲಿಯಾಪ್ಟಿರ ಗಣದ ಒಂದು ಕುಟುಂಬ. ಹುರುಪೆ ಕೀಟಗಳು. ಈ ಕುಟುಂಬ ಸದಸ್ಯರನ್ನು ಲೇಡಿ ಬೀಟಲ್ಸ್  ಎಂದು ಕರೆಯುವರು. ಇವು ಮಾಂಸಾಹಾರಿಗಳು, ಸಸ್ಯಹೇನುಗಳು ಮತ್ತು ಇತರ ವಿನಾಶಕಾರಿ ಕೀಟಗಳನ್ನು ತಿಂದು ಜೀವಿಸುತ್ತವೆ. ಸಾಮಾನ್ಯವಾಗಿ ಇವು ಸಣ್ಣಗಾತ್ರದ ಜೀರುಂಡೆಗಳು; ಕಾಲು ಅಥವಾ ಅರ್ಧ ಅಂಗುಲ ಉದ್ದವಿರುತ್ತವೆ. ದೇಹ ಗುಂಡಗೂ ಅಂಡಾಕಾರವಾಗೂ ಇದೆ; ಮೇಲ್ಭಾಗ ಉಬ್ಬಿದ್ದು ತಳಭಾಗ ಚಪ್ಪಟೆಯಾಗಿದೆ. ಇವುಗಳ ಬಣ್ಣ ಸಾಮಾನ್ಯವಾಗಿ ಕಪ್ಪು, ಕೆಂಪು ಇಲ್ಲವೆ ಕೆಂಪು ಮಿಶ್ರಿತ ಕಂದು. ಕೆಂಪುಬಣ್ಣದ ದೇಹವಾದರೆ ಕಪ್ಪುಚುಕ್ಕೆಗಳೂ ಕಪ್ಪುಬಣ್ಣದ್ದಾದರೆ ಕೆಂಪುಚುಕ್ಕೆಗಳೂ ಇವೆ. ತಲೆ ಸಣ್ಣದು; ಕೆಳಮುಖವಾಗಿ ಬಗ್ಗಿದೆ. ಇದರಿಂದ ಎದೆಯ ಮುಂದಿನ ಖಂಡದ ಮೇಲ್ಭಾಗ ಚೆನ್ನಾಗಿ ಎದ್ದುಕಾಣುತ್ತದೆ. ತಲೆಯ ತುದಿಯಲ್ಲಿ ಕುಡಿಮೀಸೆಗಳಿವೆ. ಮೊದಲನೆಯ ಜೊತೆ ರೆಕ್ಕೆಗಳು ಉದ್ದವಾಗಿರುವುದರಿಂದ ಹೊಟ್ಟೆಯ ಭಾಗ ಕಾಣುವುದಿಲ್ಲ. ಕಾಲುಗಳು ಮೊಟಕು; ಮೂರು ಟಾರ್ಸಸ್ ಖಂಡಗಳಿಂದ ಕೂಡಿವೆ. ಈ ಕೀಟಗಳ ಡಿಂಭಗಳು ಬಹಳ ಚಟುವಟಿಕೆಯಿಂದ ಎಲೆಗಳ ಮತ್ತು ಕೊಂಬೆಗಳ ಸುತ್ತ ಆಹಾರಕ್ಕಾಗಿ ಹರಿದಾಡುತ್ತವೆ. ಡಿಂಭಗಳ ದೇಹದ ಬಣ್ಣ ಕಪ್ಪು. ದೇಹದ ಎರಡು ಪಕ್ಕಗಳಲ್ಲಿ ಹಳದಿ ಅಥವಾ ನೀಲಿ ಬಣ್ಣದ ಚುಕ್ಕೆಗಳಿವೆ. ಡಿಂಭಗಳು ಪ್ರೌಢಕೀಟಗಳಾಗುವವರೆಗೂ ಒಂದೇ ಗಿಡದಲ್ಲಿ ಜೀವಿಸುತ್ತವೆ. ಕಾಕ್ಸಿನೆಲ್ಲಿಡೀ ಕುಟುಂಬದ ಹಲವಾರು ಪ್ರಭೇದಗಳು ಸಸ್ಯಪಿಡುಗುಗಳಾದ ಇತರ ಕೀಟಗಳನ್ನು ತಿಂದು ಜೀವಿಸುತ್ತವೆ. ಕಾಕ್ಸಿನೆಲ ಸೆಪ್ಟೆಂಪಂಕ್ಟೇಟ ಎಂಬ ಕಪ್ಪುಚುಕ್ಕೆಗಳುಳ್ಳ ಕೆಂಪು ಜಾತಿಯ ಕೀಟಗಳು ಬೆಟ್ಟಗಾಡುಗಳಲ್ಲಿರುವ ಪಿಯರ್ ಮರಗಳನ್ನು ಕಾಡುವ ಏಫಿಡುಗಳನ್ನು ತಿಂದು ಜೀವಿಸುತ್ತವೆ. ಇವು ಹಸಿರು ಹುರುಪೆ ತಿಗಣೆಗಳ  (ಗ್ರೀನ್ ಸ್ಕೇಲ್ ಇನ್ಸೆಕ್ಟ್ಸ್) ವೈರಿಗಳೆಂದೂ ಹೆಸರಾಗಿವೆ. ಸಿಮ್ನಸ್ ಎಂಬ ಜಾತಿಯವು ಏಫಿಡುಗಳ ಮೊಟ್ಟೆಗಳನ್ನೇ ಆಹಾರವಾಗಿ ತಿನ್ನುತ್ತವೆ.

 ಅಮೆರಿಕ ಸಂಯುಕ್ತಸಂಸ್ಥಾನದ ಎಲ್ಲೆಡೆಯಲ್ಲೂ ಹರಡಿರುವ ಅಡಿಲಿಯ ಬೈಪಂಕ್ಟೇಟ ಜಾತಿಯ ಜೀರುಂಡೆಗಳು ಸಸ್ಯ ಹೇನುಗಳನ್ನೇ ಆಹಾರವಾಗಿ ತಿನ್ನುತ್ತವೆ. ಕೈಲೊಕೋರಸ್ ಸ್ಟಿಗ್ಮ ಜಾತಿಯವು ಹುರುಪೆಕೀಟಗಳು, ಏಫಿಡ್ ಮತ್ತು ಆಲೂಗಡ್ಡೆ ಬೀಟಲ್ ಮುಂತಾದುವನ್ನು ತಿನ್ನುತ್ತವೆ. ಕೋಲಿಯೊಮೆಜಿಲ್ಲ ಫ್ಯುಸಿಲೇಬ್ರಿಸ್ ಜಾತಿಯವು ಅನೇಕ ವಿಧದ ಸಸ್ಯಹೇನು ಮತ್ತು ಇತರ ಚಿಕ್ಕ ಕೀಟಗಳಿಗೆ ವಿನಾಶಕಾರಿ. ಹಿಪ್ಪೊಡೇಮಿಯ ಕನ್ವರ್ಜೆನ್ಸ್ ಜಾತಿಯವು ಎಲ್ಲೆಡೆಯಲ್ಲ್ಲಿಯೂ  ಹರಡಿದ್ದು ಅನೇಕ ವಿಧದ ಸಸ್ಯಹೇನುಗಳನ್ನು ತಿನ್ನುವುವಲ್ಲದೆ ಕೆಂಪು ಜೇಡಗಳು ಮತ್ತು ಅಲ್ಫಾಲ್ಫ ಕುಟ್ಟಿ ಹುಳುಗಳನ್ನೂ ತಿನ್ನುತ್ತವೆ. ಕೆಲವುಬಾರಿ ಇವು ಪೆಸಿಫಿಕ್ ಸಾಗರದ ತೀರದಲ್ಲೂ ಎತ್ತರದ ಪರ್ವತ ಶ್ರೇಣಿಗಳಲ್ಲೂ ಗುಂಪು ಗುಂಪಾಗಿ ಸೇರುವುದುಂಟು. ಹೀಗೆ ಸೇರುವ ಜೀರುಂಡೆಗಳನ್ನು ಸಸ್ಯಸಂರಕ್ಷಣಾಧಿಕಾರಿಗಳು ಕಲೆಹಾಕಿ, ವಸಂತಕಾಲದಲ್ಲಿ ಕಾಣಿಸಿಕೊಳ್ಳುವ ಸಸ್ಯಹೇನುಗಳನ್ನು ನಾಶಮಾಡಲು ಅಮೆರಿಕ ಸಂಯುಕ್ತ ಸಂಸ್ಥಾನದ  ಎಲ್ಲೆಡೆಗಳಿಗೂ ಹಂಚುತ್ತಾರೆ. ಹತ್ತು ಎಕರೆ ಜಮೀನಿನಲ್ಲಿರುವ ಸಸ್ಯಗಳನ್ನು ಸಸ್ಯಹೇನುಗಳ ಕಾಟದಿಂದ ರಕ್ಷಿಸಲು ಮೂವತ್ತು ಸಾವಿರಗಳಷ್ಟು ಜೀರುಂಡೆಗಳು ಸಾಕು ಎಂದು ಅಂದಾಜಿದೆ. ಹೊರದೇಶಗಳಿಂದ ಆಮದಾಗುವ ಸಸ್ಯಗಳೊಂದಿಗೆ ಬಂದ ಕೆಲವು ಕೀಟಗಳು ಅಮೆರಿಕದ ಹೊರದೇಶಗಳಿಂದ ಆಮದಾಗುವ ಸಸ್ಯಗಳೊಂದಿಗೆ ಬಂದ ಕೆಲವು ಕೀಟಗಳು ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ವಿನಾಶಕಾರಿ ಕೀಟಗಳಾಗಿ ಪರಿಣಮಿಸಿರುವುದರಿಂದ ಇದನ್ನು ನಾಶಮಾಡಲು ಕೆಲವು ಜಾತಿಯ ಜೀರುಂಡೆಗಳನ್ನು ಹೊರದೇಶಗಳಿಂದ ತರಿಸಿ, ಸಾಕಿ ಬೇಕಾದಾಗ ಉಪಯೋಗಿಸುತ್ತಾರೆ. ಉದಾಹರಣೆಗೆ ರೊಡೋಲಿಯ ಕರ್ಡಿನಾಲಿಸ್ ಎಂಬ ಆಸ್ಟ್ರೇಲಿಯಾದ ಜೀರುಂಡೆಗಳನ್ನು ಹತ್ತಿ ಗಿಡದ ಮೇಲಿರುವ ಹುರುಪೆ ಕೀಟಗಳನ್ನು ನಾಶಪಡಿಸಲು ಉಪಯೋಗಿಸುತ್ತಾರೆ. ಇದೇ ರೀತಿ ಕ್ರಿಪ್ಟೊಲೇಮಸ್  ಮಾನ್‍ಟ್ರಾನ್‍ಜೆಯರಿ ಎಂಬ ಜೀರುಂಡೆಯನ್ನು ಕ್ಯಾಲಿಫೋರ್ನಿಯ ರಾಜ್ಯದ ಹಲವು ಬಗೆಯ ಮೇಣತಿಗಣೆಗಳನ್ನು (ಮೀಲೀಬಗ್ಸ್) ನಾಶ ಮಾಡಲು ಬಳಸುತ್ತಾರೆ. ಈ ರೀತಿ ಇತರ ದೇಶಗಳಿಂದ ಆಮದು ಮಾಡಿಕೊಂಡ ಲೇಡಿ ಬೀಟಲ್‍ಗಳು ಹಾನಿಕಾರಕ ಕೀಟಗಳನ್ನು ನಾಶಮಾಡುವುದರಲ್ಲಿ ಬಹಳ ಯಶಸ್ವಿಯಾಗಿವೆ. ಇದು ಜೈವಿಕ ಕೀಟನಿಯಂತ್ರಣಕ್ಕೊಂದು ಉತ್ತಮ ಉದಾಹರಣೆ.  

 

  (ಪಿ.ಎ.ಆರ್.)       

(ಪರಿಷ್ಕರಣೆ: ಡಾ|| ಎನ್. ಎಸ್. ಲೀಲಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ